ಕನ್ನಡ ಕೋಗಿಲೆ

ಕನ್ನಡ ಕೋಗಿಲೆ

ಕನ್ನಡ ನುಡಿ ಅಲಂಪಿನಿಂಪನು
ಕರುನಾಡಿಗೆ ಗಾನದಿ ತೋರಿ
ಕೋಗಿಲೆ ಕಂಠದ ಐಸಿರಿಯನು
ಸುಜನರಿಗೆ ಧಾರೆಯನೆರೆದವರು

ಕಾವ್ಯ ಭಾವಗಳ ರಸಗಳಿಗೆ
ಸ್ವರ ನೀಡಿದ ನಿಧಿಯೆನಿಸಿ
ಕನ್ನಡ ನಾಡ ಏಕತೆ ಮೊಳಗೆ
ಗಡಿಯಾಚೆಗು ಧ್ವನಿಯಾದವರು

ರಾಗತಾಳದಾಳಕ್ಕೆ ಮುಳುಗಿ
ಮುತ್ತುಗಳಾರಿಸಿ ಪೋಣಿಸಿದ
ಹೊಸತಿನ ಕ್ಷಿತಿಜವನಾವರಿಸಿ
ಸಗ್ಗದ ಸಾಧನೆ ಮೆರೆದವರು

ಜಾನಪದ ರತ್ನನ ನುಡಿಗಳನು
ಸುಗಮ ಸಂಗೀತದೊಳ ಹೊಸೆದು
ಕವಿಗಳ ವಾಣಿಯ ಸವಿ ತಿರುಳನು
ರಸ ಬೀಡಿಗೆ ಹರಿಸಿದ ಘನರು

ಉದಯವಾಗುವ ನಾಡಿಗೆ ಕನಸಿ
ಗಾನ ಗಂಗೆಯ ಧರೆಗಿಳಿಸಿ
ಅಳುವ ಕಡಲೊಳು ನಗೆಯ ತೇಲಿಸಿ
ಬಾಳಿನೇಳುಬೀಳನೀಂಟಿದರು

ಕನ್ನಡ ನಾಡು ನುಡಿಯಂಗಳದಲಿ
ನವ ಚೇತನ ಕಹಳೆ ಮೊಳಗಿದ
ಗೀತ ಲೋಕದ ನೀಲ ಬಾನಲಿ
ಕಾಳಿಂಗರಾಯ ಸದಾ ಹಸಿರು

(ಸುಗಮ ಸಂಗೀತದ ʼಶತಮಾನೋತ್ಸವʼ ಆಚರಿಸಲಾಗುತ್ತಿರುವ ಈ
ಸಂದರ್ಭಕ್ಕೆ ಪಾಂಡೇಶ್ವರ ಕಾಳಿಂಗ ರಾಯರ ಕೊಡುಗೆಯ ಸ್ಮರಣೆ)

1 Comment

Leave a Reply

Your email address will not be published. Required fields are marked *